

ಇದೊಂದು ವಿಚಿತ್ರ ಪ್ರಕರಣ. ಉತ್ತರ ಪ್ರದೇಶದ ಯುವ ಕ್ರಿಕೆಟ್ ಆಟಗಾರನೊಬ್ಬ ತನಗೆ ಮುಂದಿನ ವರ್ಷದ ಐಪಿಲ್ ನಲ್ಲಿ ಆಟವಾಡಲು ಅವಕಾಶ ಕೊಡಿಸಲು ಬಿಸಿಸಿಐಗೆ ಸೂಚಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾನೆ. ಅಂದಹಾಗೆ ಆ ಕ್ರಿಕೆಟಿಗ ಭಾಗಶಃ ದೃಷ್ಟಿ ದೋಷ ಎದುರಿಸುತ್ತಿದ್ದಾನೆ.
ಸುಪ್ರಿಂಕೋರ್ಟ್ ಆತನ ಮನವಿ ಸ್ವೀಕರಿಸಿದ್ದು, ಮುಂದಿನ ವಾರ ವಿಚಾರಣೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ.
ಅರ್ಜಿದಾರ ರತೇಂದ್ರ ಸಿಂಗ್ ಜಯರಾ ತಮ್ಮ ಅರ್ಜಿಯಲ್ಲಿ, ಐಪಿಎಲ್ ನಲ್ಲಿ ತಮ್ಮನ್ನು ಪರಿಗಣಿಸುವಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿಂದ ನಿರ್ದೇಶನ ನೀಡಬೇಕೆಂದು ಬಯಸಿದ್ದಾರೆ.
ರತೇಂದ್ರ ಜಯರಾ ಏಳು ರಾಷ್ಟ್ರೀಯ ಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಟಗಾರನಾಗಿ ಪ್ರತಿನಿಧಿಸಿದ್ದಾರೆ.
2018 ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಆಡಲು ಬಯಸಿ ಪ್ರಯತ್ನ ನಡೆಸಿದ್ದರು. ಆದರೆ ಅವಕಾಶ ನಿರಾಕರಿಸಲಾಗಿತ್ತು. ಹೀಗಾಗಿ ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (ಐಪಿಎಲ್) ನ್ಯಾಯಾಲಯದ ಮೂಲಕ ಪ್ರವೇಶ ಪಡೆಯುವ ಉತ್ಸಾಹದಲ್ಲಿದ್ದಾರೆ. ಜತೆಗೆ ತಮಗೆ ಆಡುವ ಅವಕಾಶ ನಿರಾಕರಿಸುವ ಮೂಲಕ ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.